Thursday, November 27, 2008

ದೇವರಿಗೆ ನಾಮ ಹಾಕುವುದು

ಇನ್ನೂ ಬಗೆಹರಿದಿಲ್ಲ ಮೇಲುಕೋಟೆಯ ನಾಮ ವಿವಾದ. ದೇವರಿಗೆ ನಾಮ ಹಾಕುವುದೇ ನಿಜವಾದರೆ ಯಾವ ನಾಮ ಹಾಕಿದರೇನು? ತೆಂಗಲೆ ಆದರೇನು ವಡಗಲೆ ಆದರೇನು?

(ಇದರ ಬಗ್ಗೆ ಗೊತ್ತಿಲ್ಲದವರಿಗೆ: ಹಿಂದೂ ಧರ್ಮದ ಅನೇಕಾನೇಕ ಜಾತಿಗಳಲ್ಲಿ ಬ್ರಾಹ್ಮಣ ಒಂದು ಜಾತಿ/ವರ್ಣ. ಅದರಲ್ಲಿ ಇರುವ ಅಸಂಖ್ಯ ಪಂಗಡಗಳಲ್ಲಿ, ಶ್ರೀವೈಷ್ಣವ (ಅಯ್ಯಂಗಾರ್) ಪಂಥವೂ ಒಂದು. ಅದರಲ್ಲಿ ಎರಡು ಬಗೆ ನಾಮ ಧಾರಣೆ ಮಾಡುವ ಸಂಪ್ರದಾಯ. ಒಂದು ಇಂಗ್ಲಿಷಿನ ಯು ಆಕಾರದ್ದಾದರೆ ಇನ್ನೊಂಡಿ ವೈ ಆಕಾರದ್ದು. )

ಸರಿ ಈಗ ವಿವಾದವೆನಪ್ಪಾ ಅಂದರೆ ದೇವರಿಗೆ ಯಾವ ನಾಮ ಹಾಕುವುದು? ಎಂದು. ಈ ವಿವಾದ ನ್ಯಾಯಾಲಯದಲ್ಲಿದೆ. ನಮ್ಮ ದೇಶದಲ್ಲಿ ಹೊಟ್ಟೆಗೆ ಅನ್ನ ಇರಬಹುದು, ಅಗತ್ಯ ವೈದ್ಯಕೀಯ ಸೌಕರ್ಯಗಲಿಲ್ಲದೆ ಹಸುಗೂಸು ಸಾಯಬಹುದು ಆದರೆ ದೇವರಿಗೆ ಹಾಕುವ ನಾಮ ಮಾತ್ರ ಸರಿಯಾಗಿರಬೇಕು. ಇದಕ್ಕಾಗಿ ಅಮೂಲ್ಯವಾದ ನ್ಯಾಯಾಲಯದ ವೇಳೆ ಜನರ ಹಣ ಎಷ್ಟು ಖರ್ಚು?

ಇನ್ನು ನಮ್ಮ ದೇಶದ ಬಗ್ಗೆ ಚಿಂತಿಸಲು ಯಾರಿಗೆ ಸಮಯವಿದೆ ಬಿಡಿ.
ಹೆಚ್ಚಿನ ವಿವರಗಳಿಗೆ
http://prajavani.net/Content/Nov272008/state20081126105589.asp?section=updatenews

Monday, October 6, 2008

ಮೂಲಭೂತವಾದ ಮತ್ತು ಧರ್ಮ

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತಾನು ಸರಿ ಅನ್ನುವವರೆಗೂ ಯಾವುದೇ ಸಮಸ್ಯೆ ಉಂಟಾಗದು. ಆದರೆ ತಾನೊಬ್ಬನೇ ಸರಿ ಅಂದಾಗ ಮಾತ್ರ ಸಮಸ್ಯೆಗಳಿ ಉದ್ಭವಿಸುವುದು. ಎಲ್ಲ ಧರ್ಮಗಳೂ ದೇವನೊಬ್ಬನೇ ಎಂದು ಬೋಧಿಸುತ್ತವೆ. ಯಾವ ದೇವರೂ ನಮ್ಮ ದೇವರು ಬೇರೆ ಪರಧರ್ಮೀಯರ ದೇವರು ಬೇರೆ ಎಂದು ಬೋಧಿಸುವುದಿಲ್ಲ. ಆದರೆ ಎಲ್ಲ ಧರ್ಮಗಳೂ ಸಹ ಪರಧರ್ಮೀಯರು ದೇವರನ್ನು ಬಿಟ್ಟು ಬೇರಾರನ್ನೋ ಪೂಜಿಸುತಾರೆ ಎಂದೇ ನಂಬಿರುವುದು. ಬಹುಷಃ ಎಲ್ಲ ಧರ್ಮದಲ್ಲೂ ಈ ರೂಢಿ ಇರಬಹುದು. ಅವರನ್ನು ಕಾಫಿರ್ ಎಂದಾಗಲಿ ಭವಿ ಎಂದಾಗಲಿ ಕೂಗುತಾರೆ. ಅಲ್ಲೇ ಇರುವುದು ಸಮಸ್ಯೆ.

ಲೋಕೋ ಭಿನ್ನ ರುಚಿಃ - ಪ್ರಪಂಚಕ್ಕೆಲ್ಲ ಒಂದೇ ದಾರಿ ಇದ್ದಿದ್ದರೆ ಕಳೆದ ೫೦೦೦ ವರ್ಷಗಳಲ್ಲಿ ನಡೆದ ಧರ್ಮಯುದ್ಧಗಳಿಂದ ಇಷ್ಟರಲ್ಲಿ ಎಲ್ಲ ಧರ್ಮ ಗಳೂ ಅಳಿದು ಒಂದೇ ಧರ್ಮ ಮಾತ್ರ ಉಳಿದಿರಬೇಕಿತ್ತು. ಆದರೆ ಹಾಗೆ ಆಗಿಲ್ಲ. ಬಹುಷಃ ವಿಜ್ಞಾನದ ಪ್ರಗತಿಯಿಂದ ಮುಂದೆ ಒಂದು ದಿನ ಆಡಿನ ಬಂದರೂ ಬರಬಹುದು. ಆದರೆ ಈ ಧರ್ಮರಕ್ಷಕ ಭಯೋತ್ಪಾದಕರಿಂದ ಅಂತೂ ಅದು ಸಾಧ್ಯವಿಲ್ಲ. ವಿದ್ಯಾವಂತ ವಿವೇಕಿ ಸಮಾಜ ಏಕೆ ಇದನ್ನು ಇನ್ನೂ ಅರಿತಿಲ್ಲ.

ಧರ್ಮಾಂಧತೆ ಎಲ್ಲ ಧರ್ಮೀಯರಿಗೂ ಒಂದೇ. ಬಜರಂಗ ದಳವೇ ಇರಲಿ ಲಷ್ಕರ್ ಎ ತೊಯ್ಬ ಇರಲಿ. ಇದು ಸಮಾಜಕ್ಕಂತಿದ ವ್ಯಾಧಿ. ಎರಡೂ ಕ್ಯಾನ್ಸರ್.

Friday, September 19, 2008

ಜಾಗತಿಕ ಅರ್ಥ ವ್ಯವಸ್ಥೆ

ಕಳೆದ ಕೆಲವು ದಿನಗಳಿಂದ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿದರೆ ಅಮೆರಿಕೆಯ ಬಂಡವಾಳಶಾಹಿ ಅರ್ಥವ್ಯವಸ್ಥೆ ಬುಡಮೇಲಾಗುವ ಸೂಚನೆಗಳು ಕಾಣುತ್ತವೆ. ಶತಮಾನಗಳಿಂದ ನಂಬಿ ಬಂದಿರುವ ಅರ್ಥವ್ಯವಸ್ಥೆ ಇಂದು ಬದಲಾವಣೆಗಳಿಗಾಗಿ ಹಾತೊರೆಯುತ್ತಿದೆ. ಕಪ್ಪು ಹಣದ ಅರ್ಥವ್ಯವಸ್ಥೆ ಭಾರತಕ್ಕೆ ವರವಾಗಿ ಪರಿಣಮಿಸಿದೆ.

ಚಿನ್ನದ ಬೆಲೆ ಇಳಿಯುತ್ತಿದೆ, ಪ್ಲಾಟ್ ಗಳು ಸುಲಭದರದಲ್ಲಿ ಸಿಗುವಂತಾಗುತ್ತವೆ, ಆದರೆ ನಮ್ಮ ಯುವಕರಿಗೆ ಉದ್ಯೋಗಾವಕಾಶಗಳೂ ಕಡಿಮೆಯಾಗುತ್ತವೆ.

ಕೆಲವೊಮ್ಮೆ ಹೀಗೆ ನಮ್ಮ ಜೀವನದಲ್ಲೂ ನಡೆಯುತ್ತದೆ ಅಲ್ಲವೇ? ವರ್ಷಾನ್ತರದಿಂದ ಬಂದಿರುವ ಪದ್ಧತಿ ರೀತಿ ನೀತಿಗಳು ಒಂದೇ ರಾತ್ರಿಯಲ್ಲಿ ಹೊಸ ವ್ಯವಸ್ಥೆಗೆ ದಾರಿ ಕೊಡುತ್ತವೆ. ಮೊಬೈಲ್ ಫೋನ್ ಕ್ರಾಂತಿಯಿಂದಾಗಿ ನಮ್ಮ ಅಂಚೆಯಣ್ಣನ ಕೆಲಸ ಕಡಿಮೆಯಾಯಿತು. ಆಟೋ ರಿಕ್ಷ ಬಂದು ಜಟಕಾ ಬಂಡಿ ಮೂಲೆ ಸೇರಿದಂತೆ.

ಈ ಬದಲಾವಣೆಗಳು ಎಷ್ಟರಮಟ್ಟಿಗೆ ಸರಿ ಎನ್ನುವುದು ಈಗಿನ ಪ್ರಶ್ನೆ. ಆದರೆ ಯಾವುದು ಸರಿ ಯಾವುದು ತಪ್ಪು ಬಲ್ಲವರಾರು? ಇಷ್ಟಕ್ಕೂ ಸರಿ ತಪ್ಪುಗಳು ಕಾಲಧರ್ಮಾನುಸಾರ ಬದಲಾವಣೆ ಹೊಂದುತ್ತವೆ ಅಲ್ಲವೇ?

Thursday, August 21, 2008

ಎಲ್ಲಕ್ಕೂ ಮೊದಲು.......

ಇಂದು ಇನ್ಫೋಸಿಸ್ ನಾರಾಯಣ ಮೂರ್ತಿಯವರು "ನಮ್ಮ ದೇಶಕ್ಕೆ ಪ್ರತಿಭೆಯನ್ನು ಆಕರ್ಷಿಸುವುದು ನಮ್ಮ ಮೂಲಭೂತ ಸೌಕರ್ಯಗಳನ್ನು ಕಟ್ಟುವುದಕ್ಕಿಂತ ಮುಖ್ಯ" ಎನ್ನುವ ಮಾತನ್ನಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಐಟಿ ಬಿಟಿ ಪ್ರಮುಖರ ಉವಾಚಗಳೆಲ್ಲ ಇದು ಮುತ್ತಿನಂತ ಮಾತು.

ನಮ್ಮ ಜನಕ್ಕೆ ಇಂದು ಮುಖ್ಯವಾಗಿ ಬೇಕಿರುವುದು ಜ್ಞಾನಾರ್ಜನೆ. ವಿದ್ಯಾರ್ಜನೆಗಿಂತ ಮುಖ್ಯವಾದುದು. ನಮ್ಮ ಹಿಂದಿನ ಶಿಕ್ಷಣ ಪದ್ಧತಿ ಮನುಷ್ಯರನ್ನು ವಿದ್ಯಾವಂತರನ್ನಾಗಿಯೂ ಜ್ನಾನವಂತಂತರನ್ನಾಗಿಯೂ ಮಾಡುತ್ತಿತ್ತು. ಆದರೆ ನಮ್ಮ ಇಂದಿನ ಶಿಕ್ಷಣ ಜನರನ್ನು ಅಕ್ಷರಸ್ತರನ್ನಾಗಿ ಮಾಡುತ್ತಿದೆಯೇ ಹೊರತು ವಿದ್ಯಾವಂತರನ್ನಾಗಿ ಯಾ ಜ್ನಾನವನ್ತರನ್ನಾಗಿಯೂ ಅಲ್ಲ. ನಮಗೆ ಇಂದು ರಸ್ತೆಗಳಿಗಿಂತ ಮುಖ್ಯವಾಗಿ ಬೇಕಿರುವುದು ರಸ್ತೆಯಲ್ಲಿ ಓಡಾಡುವ ಜನರ ತಲೆಯಲ್ಲಿ ಸ್ವಲ್ಪ ಬುದ್ದಿ, ವಿವೇಕ.

ಈ ಭ್ರಷ್ಟ ರಾಷ್ಟ್ರದಲ್ಲಿ ಮೂರು ಪದಕವನ್ನು ಒಲಂಪಿಕ್ ನಲ್ಲಿ ಪಡೆಯಲು ಪ್ರತಿಭೆ ಕಾರಣ, ವ್ಯವಸ್ಥೆ ಅಲ್ಲ. ನಿಜ ಉತ್ತಮ ವ್ಯವಸ್ಥೆಯಲ್ಲಿ ಪ್ರತಿಭೆಗಳು ಬೆಳೆಯುತ್ತವೆ. ಆದರೆ ಪ್ರತಿಭೆಯೇ ಉತ್ತಮ ವ್ಯವಸ್ಥೆಯನ್ನು ಸೃಷ್ಟಿಸಲು ಬೇಕಿರುವ ಮೂಲಧಾತು. ಹಿಟ್ಲರನ ಅಟ್ಟಹಾಸದ ಮಧ್ಯೆ ಐನಸ್ಟೀನ್ ಮುಂತಾದ ಯಹೂದ್ಯರು ಬೆಳೆಯಲಿಲ್ಲವೇ?

ನಮಗೆ ಸಾಫ್ಟ್ ವೇರ್ ಕಂಪನಿಗಳಿಗಿಂತ ಮುಖ್ಯವಾಗಿ ಬೇಕಿರುವುದು ಸಾಫ್ಟ್ ವೇರ್ ಬರೆಯಬಲ್ಲ ಪ್ರತಿಭಾವಂತರು. ನಮಲ್ಲಿ ಗೂಗಲ್ಲಿ ಗಿಂತ ಉತ್ತಮ ಸಾಫ್ಟ್ ವೇರ್ ಬರೆಯಬಲ್ಲ ಜನ ಇದ್ದರೆ ನಾವೇ ಭವಿಷ್ಯದ ಗೂಗಲನ್ನು ಸ್ಥಾಪಿಸಬಹುದಲ್ಲ. ನಮಲ್ಲಿ ಪ್ರತಿಭೆ ಇದೆ ಪ್ರತಿಭಾವಂತರು ಇಲ್ಲ.

ಈಗಾಲಾದರೂ ನಾವು ನಮ್ಮ ಜನಕ್ಕೆ ಗೆಲ್ಲುವ ಹುಚ್ಚು ಸಾಧಿಸುವ ಹುಚ್ಚು ಹಿಡಿಸುವ ಪ್ರಯತ್ನ ಮಾಡೋಣವೆ ?

Tuesday, August 5, 2008

ಬೆಂಗಳೂರು ಮತ್ತು ವಿದ್ಯುತ್

ಕಳೆದ ಎರಡು ವಾರದಿಂದ ನನಗೆ ಬ್ಲಾಗಿಸಲು ಸಾಧ್ಯವಾಗಲಿಲ್ಲ. ಕಾರಣ ನನ್ನ ಕಾರ್ಯಕ್ರಮ ಅಲ್ಲ. ಬೆಂಗಳೂರಿನ ವಿದ್ಯುತ್ ಪರಿಸ್ಥಿತಿ. ನಾವು ಜಗತ್ತಿನ ಮುಂದುವರಿದ ರಾಷ್ಟ್ರಗಳ ಜೊತೆ ಮಾಹಿತಿ ತಂತ್ರಜ್ಞಾನ ಮತ್ತು ಇತರೆ ವಿಷಯಗಳಲ್ಲಿ ಪೈಪೋಟಿಗೆ ಇಳಿದಿದ್ದೇವೆ. ಈ ಕ್ಷೇತ್ರಗಳಲ್ಲಿ ನಡೆದಿರುವ ಪ್ರಗತಿಗೆ ನಮಗೆ ನಾವೇ ಬೆನ್ನು ತಟ್ಟಿ ಕೊಳ್ಳುತ್ತೇವೆ. ಆದರೆ ಒಂದು ತಿಂಗಳು ಮಳೆ ಬಾರದಿದ್ದರೆ ನಮ್ಮ ಪರಿಸ್ಥಿತಿ ದೇವರಿಗೇ ಪ್ರೀತಿ.

ನಮ್ಮ ರಸ್ತೆಗಳು ಸುಧಾರಿಸಲು ಇನ್ನೂ ೫ ವರ್ಷ ತೆಗೆದುಕೊಂಡರೂ ಪರವಾಗಿಲ್ಲ. ಆದರೆ ವಿದ್ಯುತ್ ಈ ಎಲ್ಲ ಕ್ಷೇತ್ರಗಳ ಜೀವ ನಾಡಿ. ಬರೀ ಕಛೇರಿಗಳಲ್ಲಿ ಜನರೇಟರ್ ಇದ್ದರೆ ಸಾಕೆ? ಅದಕ್ಕೆ ಡೀಸಲ್ ಬೇಕಲ್ಲ. ಮತ್ತು ಮನೆಯಲ್ಲಿ ಕೆಲಸ ಮಾಡುವವರ, ಸಣ್ಣ ಪ್ರಮಾಣದ ಉದ್ದಿಮೆ ನಡೆಸುವವರ ಪಾಡೇನು?

ಕಳೆದ ತಿಂಗಳು ಗುಜರಾತ್ ಮುಖ್ಯ ಮಂತ್ರಿ ಮೋದಿ ಗುಜರಾತ್ ಕೇಂದ್ರಕ್ಕೆ ಕೊಡುತ್ತಿರುವ ಹಣದಬಗ್ಗೆ ಮತ್ತು ಅದಕ್ಕೆ ಆ ರಾಜ್ಯಕ್ಕೆ ಸಿಗುತ್ತಿರುವ ಸುಕರ್ಯಗಳ ಬಗ್ಗೆ ಮಾತನಾಡಿದರು. ಕಳೆದ ವಾರ ನನ್ನ ಸ್ನೇಹಿತನೊಬ್ಬ ತನ್ನ ಮನೆಯ ಸುತ್ತ ಇರುವ ರಸ್ತೆಯ ಪರಿಸ್ಥಿತಿಯ ಬಗ್ಗೆ ಇದೇ ತರಹದ ಮಾತನಾಡಿದ. ಕಳೆದ ವರ್ಷದಲ್ಲಿ ನಾನೊಬ್ಬನೇ ಸುಮಾರು ೧೦ ಲಕ್ಷ ಆದಾಯ ತೆರಿಗೆ ಪಾವತಿ ಮಾಡಿದ್ದೇನೆ. ಬರೀ ನನ್ನ ಹಣದಿಂದಲೇ ಈ ರಸ್ತೆಯ ದುರಸ್ತಿ ಸಾಧ್ಯವಾಗುತ್ತಿತ್ತು. ಈ ಬಗ್ಗೆ ನಾವು ಯೋಚಿಸಬೇಕಲ್ಲವೇ?

Wednesday, July 9, 2008

ಕುದುರೆ ವ್ಯಾಪಾರ

ಕಳೆದ ಕೆಲ ದಿನಗಳಿಂದ ದೆಹಲಿ ಮತ್ತು ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿರುವ ವ್ಯಾಪಾರ ಅಂದರೆ ಕುದುರೆ ವ್ಯಾಪಾರ. ಪ್ರಜಾತಂತ್ರವೆಂಬ ನಾಟಕರಂಗದಲ್ಲಿ ಪ್ರಜೆಯೇ ದೊರೆ, ಪ್ರಜಾಪ್ರತಿನಿಧಿಯೇ ದೇವರು. ಎಲ್ಲಕ್ಕೂ ಸಂಖ್ಯಾಬಲವೇ ಮುಖ್ಯ ಆಧಾರ. ಅಧಿಕಾರ ಪಡೆಯಲು ಮತ್ತು ಉಳಿಸಲು ಬೇಕಾದ ಪ್ರಜಾಪ್ರತಿನಿಧಿಗಳನ್ನು ಮಾರುವವರ, ಕೊಳ್ಳುವವರ, ವ್ಯಾಪಾರ ಕುದುರಿಸುವ ದಲ್ಲಾಳಿಗಳ ಚಟುವಟಿಕೆ ಕಳೆದ ಕೆಲವು ವಾರಗಳಿಂದ ಭರಾಟೆಯಾಗಿ ಸಾಗಿದೆ. ಅತ್ತ ದೆಹಲಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ನಮ್ಮ ಪ್ರಧಾನಿಗಳು ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಎಡ ಪಕ್ಷಗಳು ಹೋದವು, ಸಮಾಜವಾದಿ ಪಕ್ಷ ಬಂತು, ಮಾಯಾವತಿ ಮಾಯ, ದೇವೇಗೌಡ ಪ್ರತ್ಯಕ್ಷ. ನಿತ್ಯ ನಡೆಯುತ್ತಿರುವ ಈ ನಾಟಕ "ಕ್ಯೊಂ ಕಿ ಸಾಸ್ ...." ಗಿಂತ ಜನಪ್ರಿಯವಾಗಿದೆ.

ಇತ್ತ ಬೆಂಗಳೂರಿನಲ್ಲಿ ಅಧಿಕಾರ ಪಡೆಯಲು ನಮ್ಮ ಮುಖ್ಯಮಂತ್ರಿಗಳು ಮೊದಲು ಪಕ್ಷೇತರರ ಬೇಟೆಯಾಡಿದರು. ನಂತರ ಪಕ್ಷಾಂತರಿಗಳ ಸರದಿ. ಅಧಿಕಾರಕ್ಕಾಗಿ ಏನುಬೇಕಾದರೂ ಮಾಡಬಹುದು. ಕರ್ನಾಟಕ ರಾಜಕೀಯದಲ್ಲಿ ಇದು ಹೊಸ ಪದ್ಧತಿ. ಅಲ್ಲಿ ಕಾಂಗ್ರೆಸ್ ಮಾಡುತ್ತಿರುವ ಕೆಲಸವನ್ನು ಇಲ್ಲಿ ಬಿಜೆಪಿ ಮಾಡುತ್ತಿದೆ. ಅಲ್ಲಿ ಕಲಾಮ್, ಸೋನಿಯಾ ಮಾಡುತ್ತಿರುವ ಕೆಲಸವನ್ನು ಇಲ್ಲಿ ನಮ್ಮ ಗಣಿ ಧಣಿಗಳು, ಮಠಾಧೀಶರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲ ಪಕ್ಷವೂ ಒಂದೇ. ಎಲ್ಲ ಪ್ರತಿನಿಧಿಗಳೂ ಒಂದೇ.

ಅಧಿಕಾರ ಮೊದಲು, ಹಣ ನಂತರ, ಇನ್ನು ಸಮಯ ಉಳಿದಿದ್ದರೆ ದೇಶ, ಜನ ಎಲ್ಲ. ಇರಲಿ ಕಾದು ನೋಡೋಣ ತೆರೆಯ ಮೇಲೆ ಮುಂದಿನ ಭಾಗವನ್ನ. ಹಿಂದೆಂದೂ ನಡೆದಿರದ ಕುತೂಹಲ ಭರಿತ ಕಥಾನಕ...

"ಹಳ್ಳಿಯಾದರೇನು ಶಿವ ದಿಲ್ಲಿಯಾದರೇನು ಶಿವಾ ಜಗವೆಲ್ಲ ಒಂದೇ ಶಿವಾ ಎಲ್ಲಾ ನಿನ್ನಂತೆ ಶಿವಾ" ಎಂಬ ನಮ್ಮ ಕವಿವಾಣಿ ಎಷ್ಟು ಸತ್ಯ ಅಲ್ಲವೇ?

ಜೈ ಕರ್ಣಾಟಕ ... ಜೈ ಭಾರತಾಂಬೆ.... ಜೈ ಪ್ರಜಾತಂತ್ರ.........

Wednesday, July 2, 2008

ಗಣ್ಯರ ಸಾವಿನ ಸುತ್ತ ಮುತ್ತ ...

ಇತ್ತೀಚಿಗೆ ನಿಧನರಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರ ಅಂತ್ಯಕ್ರಿಯೆಯ ಸುತ್ತ ಕವಿದಿದ್ದ ವಿವಾದದ ಸಾರ ಸರ್ಕಾರ ವೀರ ಯೋಧನಿಗೆ ಉಚಿತ ಮರ್ಯಾದೆಗಳನ್ನು ಕೊಡದೆ ಅವರಿಗೆ ಅವಮಾನ ಮಾಡಿತು ಎನ್ನುವುದು. ಹಾಗೆ ನೋಡಿದರೆ ಬಹುತೇಕ ಗಣ್ಯರ ಸಾವು ವಿವಾದದಲ್ಲಿ ಇಲ್ಲವೇ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲಿ ಕೊನೆಗಾನುವುದನ್ನು ನಾವು ಕಾಣುತ್ತೇವೆ. ಇಂದಿರಾ ಗಾಂಧಿಯವರ ಸಾವಿನ ನಂತರ ನಡೆದ ಘಟನೆಗಳು ಭಾರತದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ನಿಂತಿದೆ. ಒಂದೇ ರಾತ್ರಿಯಲ್ಲಿ ಸುಮಾರು ೨೦೦೦೦ ಸಿಕ್ಕರ ರಕ್ತದಿಂದ ದೆಹಲಿ ನಗರ ತೊಯ್ದು ಹೋಯಿತು. ನಟ ಎಂ.ಜಿ.ಅರ್. ನಿಧನದ ನಂತರ ಆತ್ಮಹತ್ಯೆ ಮಾಡಿಕೊಂಡವ ಸಂಖ್ಯೆ ಎಷ್ಟೋ.

ಡಾ.ರಾಜಕುಮಾರ್ ನಿಧನದ ನಂತರ ಬೆಂಗಳೂರಿನಲ್ಲಿ ನಡೆದ ಘಟನೆಗಳು ಕನ್ನಡಿಗರ ಚರಿತ್ರೆಯಲ್ಲಿ ದಾಖಲಾಗಿದೆ. ಅವಕಾಶವಾದಿ ಸಮಾಜ ಘಾತುಕ ಶಕ್ತಿಗಳು ಇಂತಹ ಸಮಯದ ಪ್ರಯೋಜನವನ್ನು ಹೇಗೆ ಪಡೆದರು ಎನ್ನುವ ವಿಷಯ ನಮಗೆಲ್ಲ ತಿಳಿದಿದೆ. ಈ ಎಲ್ಲ ಸಂಧರ್ಭಗಳಿಂದ ನಾವು ಕಲಿಯಬೇಕಾದೆ ಪಾಠ ಏನಾದರೂ ಇದೆಯೇ ಎನ್ನುವುದು ನಾನು ಚರ್ಚಿಸುತ್ತಿರುವ ವಿಷಯ.

ಭಾರತದಲ್ಲಿ ಸಾಂಪ್ರದಾಯಿಕವಾಗಿ ಸಾವು ಮತ್ತು ಸಾವಿನ ಸಂಬಂಧಿ ವಿಷಯಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರ ಬಗ್ಗೆ ಮಾತನಾದುವುದಿರಲಿ, ಚಿಂತಿಸುವುದೂ ನಿಷಿದ್ಧ. ಇತ್ತೀಚೆಗಷ್ಟೇ ನಾವು ಇನ್ಶುರನ್ಚೆ, ವಿಲ್ ಮುಂತಾದವುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಂದಿಗೂ ನಮ್ಮ ಸಾಂಪ್ರದಾಯಿಕ ಕುಟುಂಬಗಳಲ್ಲಿ ಕುಟುಂಬದ ಮುಖ್ಯಸ್ಥರನ್ನು ವಿಲ್ ಮಾಡಿದ್ದೀರಾ ಎಂದು ಮಕ್ಕಳು ಕೀಳುವ ಧೈರ್ಯ ಮಾಡಲಾರರು. ಅದೇನಿದ್ದರು ವಿವೇಕಿ ಹಿರಿಯರು ಮಾಡಿದರೆ ಉಂಟು ಇಲ್ಲದಿದ್ದರೆ ಇಲ್ಲ. ಇಂತಹ ಸಮಾಜದಲ್ಲಿ ನಾನು ಸೂಚಿಸುತ್ತಿರುವ ವಿಷಯ funeral planning ಬಗ್ಗೆ.

ಸರ್ಕಾರ ಗಣ್ಯ ವ್ಯಕ್ತಿಗಳ ನಿಧನಾನಂತರ ನಡೆಯುವ ಕಾರ್ಯಕ್ರಮಗಳನ್ನು ಮೊದಲೇ ನಿರ್ಧರಿಸಿದರೆ ಬಹಳ ಸಮಸ್ಯೆಗಳು ಉಂಟಾಗುವುದೇ ಇಲ್ಲ. ನಿಜ ಎಲ್ಲ ಸಾವೂ ನಿರೀಕ್ಷಿತವಲ್ಲ, ಆದರೆ ಎಲ್ಲರ ಸಾವೂ ಖಚಿತ ತಾನೆ? ಕೆಲವು ಸಂದರ್ಭದಲ್ಲಿ ಗಣ್ಯರು ಹಲವಾರು ದಿನದ ಆಸ್ಪತ್ರೆಯ ವಾಸದ ನಂತರ ನಿಧನರಾದಾಗಳೂ ಸಹ ಅವರ ಅಂತ್ಯಕ್ರಿಯೆಯ ಬಗ್ಗೆ ನಾವು ಯೋಚಿಸುವುದಿಲ್ಲ. ಅವರ ಅಂತಿಮ ದರ್ಶನಕ್ಕೆ ಎಷ್ಟು ಜನಬರಬಹುದೆಂಬ ಅಂದಾಜು ನಮಗಿರುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವುದು ನಂತರದ ಮಾತು.

ಇದು ಅತಿ ಸಣ್ಣ ವಿಚಾರ. ಸರ್ಕಾರ ಮಾಡಬೇಕಾದ ಮುಖ್ಯ ಕೆಲಸಗಳು ಇದಕ್ಕಿಂತ ಬಹಳ ಇವೆ ಅಂದಿರಾ? ಅದೂ ನಿಜ ಅನ್ನಿ...