Friday, June 27, 2008

ಬೆಂಗಳೂರು, ಸಂಚಾರ ಸಮಸ್ಯೆ ಇತ್ಯಾದಿ

ಕಳೆದ ವಾರ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಯಣಿಸುವ ಅವಕಾಶ ನನ್ನದಾಯಿತು. ಬೆಂಗಳೂರಿನಿಂದ ಸುಮಾರು ೪೦ ಕಿ.ಮಿ. ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ತಲುಪುವ ಮಾರ್ಗಗಳ ಬಗ್ಗೆ ಸ್ವಲ್ಪ ವಿಚಾರಿಸಿದೆ. ಬೆಂಗಳೂರು ನಗರ ಸಾರಿಗೆ ಸಂಸ್ಥೆಯು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕಾಗಿ ವಾಯುವಜ್ರ ಎಂಬ ವೋಲ್ವೋ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಪ್ರತಿ ಒಂದು ಗಂಟೆಗೆ ಈ ಬಸ್ಸಿನ ವ್ಯವಸ್ಥೆ ಇದೆ. ಇದಲ್ಲದೆ ಹಲವಾರು ಟ್ಯಾಕ್ಸಿ ಕಂಪನಿಗಳು ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತಿವೆ. ಜಯನಗರದಿಂದ zoom ಎಂಬ ಟ್ಯಾಕ್ಸಿ ವ್ಯವಸ್ಥೆ ಇದೆ. ಅವರು ನಿಮ್ಮ ಮನೆಯಿಂದ ಅವರ ಕಚೇರಿಗೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ವ್ಯಾನಿನಲ್ಲಿ ಎಲ್ಲರನ್ನೂ ನಿಯಮಿತ ಅವಧಿಗೆ ಒಮ್ಮೆ ಕರೆದೊಯ್ಯುತ್ತಾರೆ. ಈ ಸೇವೆ ವೋಲ್ವೋ ಬಸ್ಸಿಗಿಂತ ಸ್ವಲ್ಪ ದುಬಾರಿ ಆದರೆ ಸ್ವಂತ ಟ್ಯಾಕ್ಸಿಗಿಂತ ಕಡಿಮೆ. ಈ ವಿಧಾನಕ್ಕೆ hub and spoke ಮಾಡೆಲ್ ಎಂದು ಹೆಸರು. ವಿಮಾನ ಸಂಸ್ಥೆಗಳು ಈ ಮಾದರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತವೆ. ಈ ವ್ಯವಸ್ಥೆ ಬೆಂಗಳೂರಿನಿಂದ ಹೊರಹೋಗುವ ಬಹುತೇಕ ಖಾಸಗಿ ಬಸ್ಸಿನವರಲ್ಲೂ ಇದೆ.

ಬೆಳಗಿನ ೬ ಗಂಟೆ ಸುಮಾರಿಗೆ ಜಯನಗರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನನ್ನ ಪ್ರಯಾಣ ಸುಮಾರು ೪೫ ನಿಮಿಷದಲ್ಲಿ ಮುಗಿಯಿತು. ಬಹಳ ಅಚ್ಚುಕಟ್ಟಾದ ರಸ್ತೆ, ಬಹಳ ಕಡೆ ಮ್ಯಾಜಿಕ್ ಪೆಟ್ಟಿಗೆಯ ಸುರಂಗಗಳು ಮತ್ತು ಮಾರ್ಗ ಸೂಚಕ ಫಲಕಗಳು ನನ್ನನ್ನು ವಿಸ್ಮಯಗೊಳಿಸಿತು. ಟೈಮ್ಸ್ ಆಫ್ ಇಂಡಿಯಾ ಪ್ರತಿದಿನ ನಮ್ಮ ವಿಮಾನ ನಿಲ್ದಾಣಕ್ಕೆ ಇರುವ ಸಂಪರ್ಕದ ಕೊರತೆಯ ಬಗ್ಗೆ ಬರೆದೂ ಬರೆದೂ ನನ್ನಲ್ಲಿ ಈ ಪ್ರಯಾಣದ ಬಗ್ಗೆ ಭೀತಿ ಮೂಡಿಸಿತ್ತು. ಆದರೆ ಆ ಮುಂಜಾವಿನ ಪ್ರಯಾಣದ ನಂತರ ನನ್ನ ಪೂರ್ವಾಗ್ರಹ ಪೀಡಿತ ಮನಸ್ಸಿಗೆ ಬಹಳ ನೆಮ್ಮದಿ ಉಂಟಾಯಿತು.

ಸುಮಾರು ಎರಡು ಗಂಟೆ ಮೊದಲೇ ವಿಮಾನ ನಿಲ್ದಾಣ ತಲುಪಿದ ನನಗೆ ವಿಮಾನ ನಿಲ್ದಾಣವನ್ನು ಪೂರ್ತಿ ನೋಡಲು ವಿರಾಮ ದೊರಕಿಸಿತ್ತು. ವಿಶ್ವದ ಯಾವುದೇ ವಿಮಾನ ನಿಲ್ದಾಣಕ್ಕೆ ಸರಿಸಾಟಿಯಾಗಿ ನಿಲ್ಲುವ ಈ ನಿಲ್ದಾಣ ಬಹಳ ಸುಂದರ ಮತ್ತು ಆಕರ್ಷಕವಾಗಿ ನಿರ್ಮಿಸಿದ್ದಾರೆ. ಅವಿದ್ಯಾವಂತ ಭ್ರಷ್ಟ ಭಾರತದಲ್ಲಿ ಇಂತಹ ವಿಮಾನ ನಿಲ್ದಾಣದ ನಿರ್ಮಾಣ ನಿಜಕ್ಕೂ ಶ್ಲಾಘನೀಯ.

ಬೆಂಗಳೂರಿನ "ನಮ್ಮ" ಐಟಿ ಬಿಟಿ ಜನ ನಮ್ಮ ಬೆಂಗಳೂರಿನ ಸಂಚಾರಿ ವ್ಯವಸ್ಥೆಯ ಬಗ್ಗೆ, ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ, ಪುಟಗಟ್ಟಲೆ ಬರೆಯುತ್ತಾರೆ. ಆದರೆ ನಮ್ಮ ಬೆಂಗಳೂರಿನ ಸಂಚಾರಿ ಅವ್ಯವಸ್ಥೆಗೆ ಈ ಕಂಪನಿಗಳು ಮತ್ತು ಅದರ ಉದ್ಯೋಗಿಗಳು ಉಪಯೋಗಿಸುವ ವಾಹನಗಳ ಕಾಣಿಕೆ ಸಣ್ಣದೇನಲ್ಲ. ರಾತ್ರಿ ಇಡೀ ಸಂಚರಿಸುವ ಈ ವಾಹನಗಳಿಂದ ಆಗಿರುವ ಅಪಘಾತಗಳಿಗೆ ಲೆಕ್ಕವೇ ಇಲ್ಲ. ಕಳೆದೆರಡು ತಿಂಗಳ ಹಿಂದೆ ಈ ವಾಹನಗಳು ಮುಷ್ಕರನಿರತವಾಗಿದ್ದಾಗ ನಮ್ಮ ಬೆಂಗಳೂರಿನ ಸಂಚಾರ ವ್ಯವಸ್ಥೆ ಎಷ್ಟು ಚೆನ್ನಾಗಿತ್ತು ಎಂದು ಎಲ್ಲರಿಗೂ ಗೊತ್ತು. ಈ ಕಂಪನಿಗಳು ಐ ಐ ಟಿ, ಐ ಐ ಎಂ ಪದವೀಧರರಿಂದ ತುಂಬಿದೆ. ಇವರು ಎಲ್ಲರು ಸೇರಿ ತಮ್ಮ ಎಲ್ಲ ಉದ್ಯೋಗಿಗಳಿಗಾಗಿ hub and spoke ಮಾದರಿ ಸಂಚಾರ ವ್ಯವಸ್ಥೆಯನ್ನು ಯಾಕೆ ಮಾಡಬಾರದು. ಆ ಕಂಪನಿಗಲಿಗಾಗುವ ಆರ್ಥಿಕ ಲಾಭಕ್ಕಿಂತ ಇದರಿಂದ ಬೆಂಗಳೂರಿಗೆ ಆಗುವ ಉಪಕಾರ ಅಷ್ಟಿಷ್ಟಲ್ಲ. ಹಣ ಉಳಿಸಲು ಬಡಪಾಯಿ ಉದ್ಯೋಗಿಗಳ ಸಂಬಳ ಕತ್ತರಿಸುವ ಆ ಕಂಪನಿಗಳು ಈ ಬಗ್ಗೆ ಯಾಕೆ ಯೋಚಿಸಿಲ್ಲ?


Tuesday, June 17, 2008

ಆರಂಭ

ಈ ಮಾಧ್ಯಮದ ಮೂಲಕ ನಿಮ್ಮನ್ನು ತಲುಪುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ನಾನು ಕನ್ನಡದಲ್ಲಿ ಬ್ಲಾಗ್ ಬರೆಯಲು ಪ್ರಾರಂಭಿಸಬೇಕೆಂದಿದ್ದಾಗ bloggerನಲ್ಲಿ ಕನ್ನಡ ಬರೆಯಲು ಇರುವ ಸೌಕರ್ಯದ ಪರಿಚಯ ಇರಲಿಲ್ಲ. ಇದ್ದಿದ್ದರೆ ಬಹಳ ಹಿಂದೆಯೇ ಬರೆಯುತ್ತಿದ್ದೆನೇನೋ. ಇರಲಿ ಗೂಗಲ್ಲಿನ ಈ ಕನ್ನಡ ತಂತ್ರಾಂಶ ನಿಜಕ್ಕೂ ಎಲ್ಲ ಕನ್ನಡ ತಂತ್ರಾಂಶಕ್ಕಿಂತ ಉತ್ತಮ. ಕಾಗುಣಿತ ತಿದ್ದುವ ಮತ್ತು ಕನ್ನಡ ಕಲಿಯುವ ಈ ತಂತ್ರಾಂಶ ನಿಜಕ್ಕೂ ನಮಗೆ ಒಂದು ವರ. ಬನ್ನಿ..... ಓದಿ...... ನಿಮ್ಮ ಅನಿಸಿಕೆಗಳನ್ನು ತಿಳಿಸಿ......................