Wednesday, July 9, 2008

ಕುದುರೆ ವ್ಯಾಪಾರ

ಕಳೆದ ಕೆಲ ದಿನಗಳಿಂದ ದೆಹಲಿ ಮತ್ತು ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿರುವ ವ್ಯಾಪಾರ ಅಂದರೆ ಕುದುರೆ ವ್ಯಾಪಾರ. ಪ್ರಜಾತಂತ್ರವೆಂಬ ನಾಟಕರಂಗದಲ್ಲಿ ಪ್ರಜೆಯೇ ದೊರೆ, ಪ್ರಜಾಪ್ರತಿನಿಧಿಯೇ ದೇವರು. ಎಲ್ಲಕ್ಕೂ ಸಂಖ್ಯಾಬಲವೇ ಮುಖ್ಯ ಆಧಾರ. ಅಧಿಕಾರ ಪಡೆಯಲು ಮತ್ತು ಉಳಿಸಲು ಬೇಕಾದ ಪ್ರಜಾಪ್ರತಿನಿಧಿಗಳನ್ನು ಮಾರುವವರ, ಕೊಳ್ಳುವವರ, ವ್ಯಾಪಾರ ಕುದುರಿಸುವ ದಲ್ಲಾಳಿಗಳ ಚಟುವಟಿಕೆ ಕಳೆದ ಕೆಲವು ವಾರಗಳಿಂದ ಭರಾಟೆಯಾಗಿ ಸಾಗಿದೆ. ಅತ್ತ ದೆಹಲಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ನಮ್ಮ ಪ್ರಧಾನಿಗಳು ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಎಡ ಪಕ್ಷಗಳು ಹೋದವು, ಸಮಾಜವಾದಿ ಪಕ್ಷ ಬಂತು, ಮಾಯಾವತಿ ಮಾಯ, ದೇವೇಗೌಡ ಪ್ರತ್ಯಕ್ಷ. ನಿತ್ಯ ನಡೆಯುತ್ತಿರುವ ಈ ನಾಟಕ "ಕ್ಯೊಂ ಕಿ ಸಾಸ್ ...." ಗಿಂತ ಜನಪ್ರಿಯವಾಗಿದೆ.

ಇತ್ತ ಬೆಂಗಳೂರಿನಲ್ಲಿ ಅಧಿಕಾರ ಪಡೆಯಲು ನಮ್ಮ ಮುಖ್ಯಮಂತ್ರಿಗಳು ಮೊದಲು ಪಕ್ಷೇತರರ ಬೇಟೆಯಾಡಿದರು. ನಂತರ ಪಕ್ಷಾಂತರಿಗಳ ಸರದಿ. ಅಧಿಕಾರಕ್ಕಾಗಿ ಏನುಬೇಕಾದರೂ ಮಾಡಬಹುದು. ಕರ್ನಾಟಕ ರಾಜಕೀಯದಲ್ಲಿ ಇದು ಹೊಸ ಪದ್ಧತಿ. ಅಲ್ಲಿ ಕಾಂಗ್ರೆಸ್ ಮಾಡುತ್ತಿರುವ ಕೆಲಸವನ್ನು ಇಲ್ಲಿ ಬಿಜೆಪಿ ಮಾಡುತ್ತಿದೆ. ಅಲ್ಲಿ ಕಲಾಮ್, ಸೋನಿಯಾ ಮಾಡುತ್ತಿರುವ ಕೆಲಸವನ್ನು ಇಲ್ಲಿ ನಮ್ಮ ಗಣಿ ಧಣಿಗಳು, ಮಠಾಧೀಶರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲ ಪಕ್ಷವೂ ಒಂದೇ. ಎಲ್ಲ ಪ್ರತಿನಿಧಿಗಳೂ ಒಂದೇ.

ಅಧಿಕಾರ ಮೊದಲು, ಹಣ ನಂತರ, ಇನ್ನು ಸಮಯ ಉಳಿದಿದ್ದರೆ ದೇಶ, ಜನ ಎಲ್ಲ. ಇರಲಿ ಕಾದು ನೋಡೋಣ ತೆರೆಯ ಮೇಲೆ ಮುಂದಿನ ಭಾಗವನ್ನ. ಹಿಂದೆಂದೂ ನಡೆದಿರದ ಕುತೂಹಲ ಭರಿತ ಕಥಾನಕ...

"ಹಳ್ಳಿಯಾದರೇನು ಶಿವ ದಿಲ್ಲಿಯಾದರೇನು ಶಿವಾ ಜಗವೆಲ್ಲ ಒಂದೇ ಶಿವಾ ಎಲ್ಲಾ ನಿನ್ನಂತೆ ಶಿವಾ" ಎಂಬ ನಮ್ಮ ಕವಿವಾಣಿ ಎಷ್ಟು ಸತ್ಯ ಅಲ್ಲವೇ?

ಜೈ ಕರ್ಣಾಟಕ ... ಜೈ ಭಾರತಾಂಬೆ.... ಜೈ ಪ್ರಜಾತಂತ್ರ.........

No comments: